ಕ್ರೆಮ್ಲಿನ್
ರಷ್ಯದಲ್ಲಿ ಮಧ್ಯಯುಗದಲ್ಲಿ ನಗರ ಮಧ್ಯದಲ್ಲಿ ರಕ್ಷಣೆಗಾಗಿ ಕಟ್ಟುತ್ತಿದ್ದ ಕೋಟೆ. ಇದನ್ನು ಸಾಮಾನ್ಯವಾಗಿ ನದಿಯ ಎತ್ತರದ ದಡದಲ್ಲಿ ಅಥವಾ ಎರಡು ನದಿಗಳು ಕೂಡುವೆಡೆಯಲ್ಲಿ ಅವುಗಳ ನಡುವೆ ಕಟ್ಟುತ್ತಿದ್ದರು. ಸುತ್ತಲ ಗೋಡೆಯನ್ನು ಮೊದಲು ಮರದಿಂದಲೂ ಇಟ್ಟಿಗೆಗಳಿಂದಲೂ ಕಟ್ಟಲಾಗುತ್ತಿತ್ತು. ಅನಂತರ ಕಾಲದಲ್ಲಿ ಕಲ್ಲು ಗೋಡೆಗಳನ್ನು ಕಟ್ಟಲಾರಂಭಿಸಿದರು. ಗೋಡೆಯ ಸುತ್ತಲೂ ಕಂದಕ ತೆಗೆಯುತ್ತಿದ್ದುದೂ ಉಂಟು. ರಕ್ಷಣೆಗಾಗಿ ಮತ್ತು ಯುದ್ಧದ ಸಮಯದಲ್ಲಿ ಸೈನಿಕ ಕಾರ್ಯಾಚರಣೆಗೆ ಉಪಯೋಗವಾಗುವಂತೆ ಕೋಟೆ ಕಟ್ಟುತ್ತಿದ್ದರು.

	ಮಾಸ್ಕೋ, ಪ್ಸ್ಕಾಫ್, ನಾವ್ಗರಾಡ್, ಸ್ಮೊಲೆನ್‍ಸ್ಕ್, ರಾಸ್ಟಾಫ್, ಸೂಜ್‍ದಾಲ್, ಯೂರೊಸ್ಲಾವ್ಲ್, ವ್ಲಾಡಿಮಿರ್, ನಿಜ್‍ನಿನಾವ್ಗರಾಡ್ ಮೊದಲಾದ ಅನೇಕ ನಗರಗಳು ಹಿಂದಿನ ಕಾಲದ ಕ್ರೆಮ್ಲಿನ್‍ಗಳ ಸುತ್ತಲೂ ಬೆಳೆದಂಥವು. ಕ್ರೆಮ್ಲಿನ್‍ನ ಒಳಗಡೆ ರಾಜ ಮತ್ತು ಬಿಷಪರ ಅರಮನೆಗಳು, ಕೆಥೀಡ್ರಲ್, ಸರ್ಕಾರದ ಕಚೇರಿಗಳು, ರಾಜಪರಿವಾರಗಳ ವಾಸದ ಮನೆಗಳು, ಮದ್ದಿನ ಮನೆ, ಮುತ್ತಿಗೆಯ ಸಮಯದಲ್ಲಿ ಅವಶ್ಯವಾದ ಆಹಾರ ಸಂಗ್ರಹಿಸಿಡಲು ಉಗ್ರಾಣಗಳು-ಇವೆಲ್ಲ ಇರುತ್ತಿದ್ದುವು. ಈ ಕಟ್ಟಡಗಳ ವಿನ್ಯಾಸದಲ್ಲಿ ಯಾವೊಂದು ಕ್ರಮವನ್ನೂ ಕಟ್ಟುನಿಟ್ಟಾಗಿ ಅನುಸರಿಸುತ್ತಿರಲಿಲ್ಲ. ಹಿಂದೆ ಮುಂದೆ, ಎತ್ತರ ತಗ್ಗು-ಹೀಗೆ ಧಾರಾಳವಾಗಿ ಇವನ್ನು ನಿರ್ಮಿಸಲಾಗುತ್ತಿತ್ತು. ಕೆಥೀಡ್ರಲ್ ಮತ್ತು ಕೋಟೆಯ ಗೋಡೆಗಳು ಉಳಿದ ಕಟ್ಟಡಗಳಿಗಿಂತ ಎತ್ತರವಾಗಿರುತ್ತಿದ್ದುವು.         
												(ಬಿ.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ